ನಿಮಗೆ ಚಂದ್ರಮತಿಯ ಕತೆ ಗೊತ್ತೆ? ತನ್ನವರೆನ್ನಲು ಇದ್ದ ಒಬ್ಬನೇ ಮಗ ಕಾಡಲ್ಲಿ ಹಾವು ಕಡಿದು ಸತ್ತು ಬಿದ್ದಿದ್ದಾನೆ. ಮಗನನ್ನು ಕಳೆದು ಕೊಂಡ ದುರಂತದ ಜತೆಯಲ್ಲಿ , ಯಾವ ಹೊತ್ತಿನಲ್ಲಿ ಯಾವ ಪ್ರಾಣಿ ಮಗನ ಶವವನ್ನು ಹೊತ್ತೊಯ್ಯುವುದೋ ಎನ್ನುವ ಆತಂಕ ಅವಳಿಗೆ. ಆದರೂ ಆಕೆ ಕೂಡಲೆ ಮಗನ ಬಳಿಗೆ ಧಾವಿಸುವಂತಿಲ್ಲ. ಮನೆ ಕೆಲಸ ಮುಗಿಸಿಯೇ ಹೊರಡುವಂತೆ ಮನೆಯಾಡತಿ ಅಪ್ಪಣೆ ಮಾಡಿದ್ದಾಳೆ. ಕರುಳು, ಕರ್ತವ್ಯಗಳ ನಡುವೆ ಆಕೆ ನಲುಗುತ್ತಿದ್ದಾಳೆ.
ಚಂದ್ರಮತಿಯನ್ನೇ ನೆನಪಿಸುವ ಕತೆ ಇಲ್ಲಿದೆ. ದೂರದ ಊರಲ್ಲಿ ಅಣ್ಣನ ಅಂತ್ಯಕ್ರಿಯೆ ನಡೆಯುತ್ತಿರುವಾಗ ಈ ಹುಡುಗಿ ಮೈಸೂರಿನ ಮನೆಯಾಂದರಲ್ಲಿ ಮುಸುರೆ ತೊಳೆಯುತ್ತಿದ್ದಳು. ಕಣ್ಣಿಂದ ಸುರಿವ ನೀರನ್ನು ತೊಡೆದುಕೊಳ್ಳಲೂ ಆಕೆಗೆ ಬಿಡುವಿರಲಿಲ್ಲ. ಮನೆಯಾಡೆಯ ಯಾವುದೇ ಕಾರಣಕ್ಕೂ ಆಕೆಯನ್ನು ಊರಿಗೆ ಕಳುಹಿಸಲು ಸಿದ್ಧನಿರಲಿಲ್ಲ. ಈ ಮೊದಲು ಅಪ್ಪ, ಅಜ್ಜ, ಚಿಕ್ಕಮ್ಮ ಸತ್ತಾಗಲೂ ಈ ಹುಡುಗಿ ಮುಸುರೆ ತೊಳೆಯುತ್ತಲೇ ಅತ್ತಿದ್ದಳು.
ಈ ಆಧುನಿಕ ಚಂದ್ರಮತಿಯ ಹೆಸರು ಶಶಿಕಲಾ. ವಯಸ್ಸು 10ವರ್ಷ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಾಣಗಳ್ಳಿ ಶಶಿಕಲಾಳ ಊರು. ನಾರಾಯಣಗೌಡ, ತಾಯಮ್ಮನ ಮೂರನೇ ಮಗಳು. ಅಪ್ಪ ನಾರಾಯಣ ಗೌಡ ಈಗಿಲ್ಲ.
ನಾಲ್ಕು ವರ್ಷಗಳ ಹಿಂದೆ, ಅಕ್ಷರ ತಿದ್ದಲು ಶಾಲೆ ಮೆಟ್ಟಿಲು ಮೆಟ್ಟಬೇಕಾದ ಆರು ವರ್ಷದ ಶಶಿ ಮೆಟ್ಟಿದ್ದು, ಹುಣಸೂರು ತಾಲೂಕು ಮುಷ್ಕರೆ ಗ್ರಾಮದ ಶ್ರೀಮಂತರ ಎಸ್ಟೇಟ್ ಮನೆಯನ್ನು, ತೊತ್ತಿನ ರೂಪದಲ್ಲಿ. ಮನೆಯಾಡೆಯ ಎನ್.ಕೆ. ಕೃಷ್ಣಮೂರ್ತಿ ನಾರಾಯಣಗೌಡರಿಗೆ ಸಾವಿರ ರುಪಾಯಿ ಸಾಲ ಕೊಟ್ಟಿದ್ದಾರೆ. ಶಶಿ ಮನೆ ಸೇರಿದ ನಂತರ ಪ್ರತಿವರ್ಷ ಮೂರು ಸಾವಿರ ನೀಡುವುದಾಗಿ ಹೇಳಿದ್ದ ಮಾತು ಕಾರ್ಯರೂಪಕ್ಕೆ ಬಂದಿಲ್ಲ.
ಮನೆಯ ಬಡತನದಿಂದಾಗಿ ಜೀತಕ್ಕೆ ಸೇರಿದ ಶಶಿಕಲಾ ಬಟ್ಟೆ, ಮುಸುರೆ ತೊಳೆಯುವ ಜೊತೆಗೆ ಹೊಲದ ಕೆಲಸವನ್ನೂ ಮಾಡಬೇಕಾಯಿತು. ಅಕ್ಷರ ಕಲಿಯಬೇಕಾದ ಎಳೆಯ ಬದುಕು ಸತತ ನಾಲ್ಕು ವರ್ಷಗಳ ಕಾಲ ಮುಂಜಾನೆ 5ರಿಂದ ರಾತ್ರಿ11ರವರೆಗೆ ಅವಿಶ್ರಾಂತವಾಗಿ ದುಡಿಯುತ್ತಿತ್ತು. ದೈಹಿಕವಾಗಿ ದಣಿದ ಜೀವ ನೋವು ಹಂಚಿಕೊಳ್ಳಲು ಮನಸ್ಸುಗಳಿಲ್ಲದೆ ಮಾನಸಿಕವಾಗಿಯೂ ದಣಿದು ಆತ್ಮಹತ್ಯೆಯ ವಿಫಲ ಯತ್ನ ನಡೆಸಿದ್ದೂ ಉಂಟು.
ಮಗಳ ದುರಂತ ಅವರಿವರ ಬಾಯಿಂದ ಕಿವಿಗೆ ಬಿದ್ದದ್ದೇ ತಡ , ತಾಯಕ್ಕಳ ಕರುಳು ಕುದ್ದು ಹೋಯಿತು. ಅವಳ ರೋಧನ ತಾಲೂಕಿನಲ್ಲಿ ಸಮಾಜಸೇವೆ ಕೆಲಸದಲ್ಲಿ ತೊಡಗಿಸಿ ಕೊಂಡಿರುವ ವಿಕಾಸ ಸಂಸ್ಥೆಗೆ ಕೇಳಿಸಲು ತಡವಾಗಲಿಲ್ಲ. ಶಶಿಕಲಾಳ ಬದುಕಿಗೆ ತಿರುವು ಕೊಡುವ ಪ್ರಯತ್ನಗಳು ಶುರುವಾದದ್ದು ಅಲ್ಲಿಂದಲೇ.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಗ್ರಾಮಾಂತರ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಯ ನಿರ್ದೇಶಕ ಜಾಯ್ ಮಾಲಿಕಲ್ ಶಶಿಕಲಾಳ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಹುಣಸೂರಿನ ಪೊಲೀಸರಿಗೆ ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು. ಪರಿಣಾಮವಾಗಿ ಶಶಿಕಲಾಳಿಗೆ ಜೀತಮುಕ್ತಿ.
ಶಶಿಕಲಾಳ ಬಿಡುಗಡೆ ಸುಲಭದ ವಿಷಯವಾಗಿರಲಿಲ್ಲ. ಸಾಲ ವಾಪಸ್ಸು ಮಾಡಲು ಬಂದ ಶಶಿ ಮನೆಯವರನ್ನು ಕೃಷ್ಣಮೂರ್ತಿ ಬೆದರಿಸಿ ಕಳಿಸಿದ್ದಾರೆ. ಬಾಲಕಾರ್ಮಿಕ ವಿರೋಧಿ ಆಂದೋಲನ(ಸಿಎಸಿಎಲ್‌ಕೆ)ದವರಲ್ಲಿ ಕೃಷ್ಣ್ಮಮೂರ್ತಿ ಯಜಮಾನಿಕೆಯ ನಡವಳಿಕೆ ತೋರಿದ್ದಾರೆ. ಆದರೆ ಪೊಲೀಸರ ಹಾಗೂ ಸಿಎಸಿಎಲ್‌ಕೆಯವರ ಪ್ರಯತ್ನದೆದುರು ಕೃಷ್ಣಮೂರ್ತಿಯ ಆಟ ಸೋಲುವುದು ಅನಿವಾರ್ಯವಾಯಿತು.
ಶಶಿಕಲಾಳ ಬಿಡುಗಡೆಯೇನೋ ಆಯಿತು. ಈಗುಳಿದಿರುವುದು ಶಶಿಕಲಾಳ ಮುಂದಿನ ಭವಿಷ್ಯದ ಪ್ರಶ್ನೆ ಹಾಗೂ ಶಶಿಕಲಾಳ ಶೋಷಿಸಿದ ಕೃಷ್ಣಮೂರ್ತಿಯ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದು. ಸ್ವಯಂ ಸೇವಾಸಂಸ್ಥೆಗಳು ಕನಿಷ್ಟವೇತನ ಕಾಯ್ದೆ ಪ್ರಕಾರ 85ಸಾವಿರ ರುಪಾಯಿ ಮತ್ತು ಶಶಿಕಲಾಳ ಮುಂದಿನ ಭವಿಷ್ಯ, ಶಿಕ್ಷಣಕ್ಕಾಗಿ ಒಂದು ಲಕ್ಷ
ರುಪಾಯಿ ಪರಿಹಾರವನ್ನು ಮಾಲಿಕನಿಂದ ಕೊಡಿಸುವಂತೆ ಒತ್ತಾಯಿಸಿವೆ. ಸ್ವಯಂ ಸೇವಾ ಸಂಸ್ಥೆಗಳ ಕೂಗು ಒತ್ತಾಯಕ್ಕಷ್ಟೇ ನಿಲ್ಲಬಾರದು. ಅವಳ ಬದುಕು ಹಸನಾಗುವಲ್ಲಿ ಅವುಗಳು ಹೆಚ್ಚಿನ ಜವಾಬ್ದಾರಿ ಹೊರಬೇಕು. ಇಲ್ಲವಾದಲ್ಲಿ ಶಶಿ ಬೆಳಕಿಗೆ ಬಂದರೂ ಅವಳ ಬದುಕು ಕತ್ತಲಲ್ಲೇ ಉಳಿಯುತ್ತದೆ.
ಕೆಲವು ದಿನಗಳ ಹಿಂದೆ ಸಚಿವೆಯಾಬ್ಬರ ಮನೆಯಲ್ಲಿ ಚಾಕರಿ ಮಾಡುತ್ತಿದ್ದ ಸುಮಿತ್ರಾ ಎನ್ನುವ ಬಾಲಕಿಯ ಪ್ರಕರಣ ವರದಿಯಾಗಿತ್ತು. ಈಗ ಶಶಿಕಲಾಳ ಸರದಿ. ಸುಮಿತ್ರಾ,ಶಶಿಯಂಥ ಅನೇಕ ಹುಡುಗ, ಹುಡುಗಿಯರ ಬಾಲ್ಯ ಗೋಡೆಗಳ ನಡುವೆ ಈ ಪರಿಯ ಗೊಡವೆಗಳ ನಡುವೆ ಕಳೆದು ಹೋಗುತ್ತಿದೆ. ಈ ಬಾಲ್ಯಗಳಿಗೂ ಬೆಳಕು ಕಾಣಲಿ, ಆ ಮೂಲಕ ಮಾನವತೆ ಮೆರೆಯಲಿ.