‘ಕನ್ನಡ ಲೇಖಕಿಯರಿಗೆ ಜ್ಞಾನಪೀಠ, ದೂರಪೀಠವಾಗಿದೆ’
ಲೇಖಕಿ ಅಶ್ವಿನಿ ಅವರಿಗೆ ಪದ್ಮಭೂಷಣ ಬಿ.ಸರೋಜದೇವಿ ಪ್ರಶಸ್ತಿ ಪ್ರದಾನ
ಬೆಂಗಳೂರು : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆ ಎಂಬುದಕ್ಕೆ, ಕನ್ನಡದ ಯಾವ ಮಹಿಳಾ ಲೇಖಕಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸದಿರುವುದು ಜೀವಂತ ಉದಾಹರಣೆ ಎಂದು ಚಲನಚಿತ್ರ ನಟಿ ಬಿ.ಸರೋಜ ದೇವಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ಉತ್ತಮ ಸಾಹಿತಿಗಳ ಪಟ್ಟಿ ಮಾಡುವಾಗ ಕೇವಲ ಪುರುಷ ಸಾಹಿತಿಗಳ ಹೆಸರನ್ನೇ ದಾಖಲಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿನ ಉತ್ತಮ ಮಹಿಳಾ ಸಾಹಿತಿಗಳನ್ನು ಗುರ್ತಿಸುವ ಕೆಲಸ ಇನ್ನಾದರೂ ನಡೆಯಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ। ಚಂದ್ರಶೇಖರ ಪಾಟೀಲ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ವಿಮರ್ಶಕಿ ಡಾ। ಎಸ್. ವಿ. ಪ್ರಭಾವತಿ, ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ್, ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಹಾಜರಿದ್ದರು.
ಪ್ರಶಸ್ತಿ : ಸರೋಜಾದೇವಿ ಅವರ ಪುತ್ರಿ ಭುವನೇಶ್ವರಿ ಸ್ಮರಣಾರ್ಥ ಸ್ಥಾಪಿಸಲಾಗಿರುವ ‘ಪದ್ಮಭೂಷಣ ಬಿ. ಸರೋಜಾ ದೇವಿ’ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಲೇಖಕಿ ಅಶ್ವಿನಿಯವರಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
(ಇನ್ಫೋ ವಾರ್ತೆ)
ಮುಖಪುಟ /
ವಾರ್ತೆಗಳು