ವಾಚಾಮಗೋಚರ ವ್ಯಕ್ತಿತ್ವ... ಅಗೋಚರ ಅಂತಸ್ಸತ್ವ...
ಬಹುಶಃ ಅದೇ ಅವರ ಶ್ರೇಷ್ಠತೆಯೂ ಇರಬಹುದು. ತುಂಬ ದೊಡ್ಡ ಲೇಖಕ ಎಲ್ಲವನ್ನೂ ಮೀರುತ್ತಾನೆ ಅನ್ನುವುದಕ್ಕೆ ಸಾಕ್ಷಿ ಕೂಡಾ ಆಗಿರಬಹುದು.
*ಸತ್ಯವ್ರತ ಹೊಸಬೆಟ್ಟು
ಕೋಟಾ ಶಿವರಾಮ ಕಾರಂತರನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅವರು ಇಂಥದ್ದೇ ಪಂತಕ್ಕೆ ಸೇರಿದವರೆಂದು ಗುರುತಿಸುವುದೂ ಕಷ್ಟ. ನವೋದಯ, ನವ್ಯ, ಬಂಡಾಯ, ದಲಿತ, ನವ್ಯೋತ್ತರ ಹೀಗೆ ಅನೇಕ ಸಾಹಿತ್ಯಿಕ ಚಳವಳಿಗಳು ಬಂದು ಹೋಗಿದ್ದರೂ ಕಾರಂತರು ಈ ಯಾವ ಚಳವಳಿಯ ಭಾಗವಾಗಿರಲಿಲ್ಲ. ಬಹುಶಃ ಅದೇ ಅವರ ಶ್ರೇಷ್ಠತೆಯೂ ಇರಬಹುದು. ತುಂಬ ದೊಡ್ಡ ಲೇಖಕ ಎಲ್ಲವನ್ನೂ ಮೀರುತ್ತಾನೆ ಅನ್ನುವುದಕ್ಕೆ ಸಾಕ್ಷಿ ಕೂಡಾ ಆಗಿರಬಹುದು.
ಜೀವನ ಎಲ್ಲಕ್ಕಿಂತ ದೊಡ್ಡದು ಎಂದು ನಂಬಿದ ಸಾಹಿತಿಗಳ ಪೈಕಿ ಕಾರಂತರು ಮೊದಲಿಗರು. ಹಾಗೆ ನೋಡಿದರೆ ಅವರೊಬ್ಬರೇ ಇರಬಹುದು. ನನ್ನ ಜೀವನ ನನ್ನದು. ಅವುಗಳ ಪಾತ್ರಗಳ ಬದುಕು ಅವುಗಳದು. ಅವೆರಡನ್ನೂ ಹೋಲಿಸಿ ನೋಡುವ ಮೂರ್ಖತನ ಮಾಡಬೇಡಿ ಎನ್ನುತ್ತಲೇ ಬರೆದ ಕಾರಂತರು ಎಲ್ಲ ಬೊಗಳೆಗಳ, ಹುಂಬತನದ, ತೋರಿಕೆಯ ವಿರೋಧಿ. ಜೀವನಾನುಭವ ಹಾಗೂ ಬುದ್ದಿ ಎರಡನ್ನೇ ನೆಚ್ಚಿಕೊಂಡವರು ಅವರು. ಅವನು ಹೀಗೆ ಹೇಳುತ್ತಾನೆ ಅಂತ ಹೇಳಬೇಡ. ನಿನ್ನದು ಏನುಂಟು ಅದನ್ನು ಹೇಳು ಎಂದು ತನ್ನ ಜೊತೆ ಮಾತನಾಡುತ್ತಿದ್ದವರನ್ನು ತಿದ್ದುತ್ತಿದ್ದ ಕಾರಂತರು, ಪರಿಸರವಾದ ವ್ಯಾಧಿಯಾದಾಗ ಅದನ್ನು ಧಿಕ್ಕರಿಸಿದವರು. ವಸಾಹತುಶಾಹಿ, ವಿದೇಶಿ ಸಂಸ್ಕೃತಿ, ಆಕ್ರಮಣ... ಎಂಬಿತ್ಯಾದಿ ಪದಪುಂಜಗಳ ನೆರಳಲ್ಲಿ ಬದುಕಲು ಯತ್ನಿಸಿದವರನ್ನು ಅದರಿಂದಾಚೆ ಕರೆತಂದು ಅವರ ಬಂಡವಾಳ ಬಯಲು ಮಾಡಿದವರು. ಸೂರ್ಯ ಅಸ್ತಂಗತನಾದ ಅಂತ ಯಾಕೆ ಹೇಳ್ತೀರಿ. ಸೂರ್ಯ ಕಂತಿದ ಅಂತ ಹೇಳಿ ಎಂದು ಪದಗಳ ಬೆನ್ನುಹತ್ತಿದವರನ್ನು ಲೇವಡಿಮಾಡಿದವರು.
‘ನಾನು ಹೇಳಿದ್ದೇ ಸರಿ’
ಇದು ಕಾರಂತರು ಅಧಿಕಾರವಾಣಿಯಿಂದ ಆಡುತ್ತಿದ್ದ ಮಾತು. ಅಂಥ ಮಾತಾಡಲು ಬೇಕಾದ ಅರ್ಹತೆಯನ್ನು ಅವರು ಗಳಿಸಿಕೊಂಡಿದ್ದರು ಅನ್ನುವುದೂ ನಿಜ. ಅವರ ಲೇಖನಗಳಾಗಲೀ, ಬರಹಗಳಾಗಲೀ ಯಾವತ್ತೂ ದಂತಗೋಪುರದಲ್ಲಿ ವಾಸ ಮಾಡಲಿಲ್ಲ. ದಲಿತರ ಬಗ್ಗೆ , ಶತಮಾನಗಳಿಂದ ತುಳಿತಕ್ಕೊಳಗಾದವರ ಬಗ್ಗೆ ತೋರಿಕೆಯ ಅನುಕಂಪ ವ್ಯಕ್ತಪಡಿಸಲಿಲ್ಲ. ವಿಮರ್ಶಕರ ಹಂಗಿಗೆ ಬೀಳಲಿಲ್ಲ.
ಅವರನ್ನು ಕಡಲ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೆಲ್ಲಾ ಕರೆದು ಕೈಬಿಟ್ಟವರಿದ್ದಾರೆ. ಹುಚ್ಚುಮನಸ್ಸಿನ ಹತ್ತು ಮುಖ ಬರೆದಾಗ ಟೀಕಿಸಿದವರಿದ್ದಾರೆ. ಕಾರಂತರು ನೇರವಾಗಿ ಬಂದ ಟೀಕೆಗೆ ಉತ್ತರ ಕೊಟ್ಟರು. ಪರೋಕ್ಷವಾಗಿ ಬಂದದ್ದಕ್ಕೆ ಕಿವಿಗೊಡಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ ಎಂಬ ಪುಟ್ಟ ಹಳ್ಳಿಯಲ್ಲಿ ಕಾರಂತರು ಹುಟ್ಟಿದ್ದು ಅಕ್ಟೋಬರ್, 10, 1902. ತಂದೆ ಶೇಷ ಕಾರಂತ, ತಾಯಿ ಲಕ್ಷ್ಮಿ. 12 ಮಕ್ಕಳ ಪೈಕಿ ಕಾರಂತರು ಐದನೆಯವರು. ಮಂಗಳೂರಲ್ಲಿ ಕಾಲೇಜು ಓದುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದ ಕಾರಂತರು ಮತ್ತೆ ಓದಿನ ಕಡೆ ಗಮನ ಹರಿಸಲಿಲ್ಲ. ಖಾದಿ ತೊಟ್ಟು ಸಾಲಗಾರರಾದರು. ವಸಂತ ಎಂಬ ಪತ್ರಿಕೆ ಆರಂಭಿಸಿ ಸಾಲ ಹೆಚ್ಚಿಸಿಕೊಂಡರು. ಫೋಟೋಗ್ರಾಫರ್ ಆಗಿ ಹಣ ಕಳೆದುಕೊಂಡರು. ಭೂತರಾಜ್ಯ ಹಾಗೂ ಡೊವಿಂಗೋ ಎಂಬೆರಡು ಸಿನಿಮಾ ಮಾಡಿ ಕೈಸುಟ್ಟುಕೊಂಡರು. ಅವರೊಮ್ಮೆ ಹುಬ್ಬಳ್ಳಿಯ ಬೀದಿಯಲ್ಲಿ ಗಡ್ಡದಾರಿಯಾಗಿ ನಡೆಯುತ್ತಿದ್ದಾಗ ಅವರನ್ನು ಸಂತ ಎಂದುಕೊಂಡ ಹಾದಿಹೋಕನೊಬ್ಬ ಸಾಷ್ಠಾಂಗ ನಮಸ್ಕಾರ ಮಾಡಿ ಆಶೀರ್ವಾದ ಬೇಡಿದ್ದನಂತೆ!
ಚಿತ್ರಕಲಾವಿದ, ರೈತ, ಬಾಲವನದ ರೂವಾರಿ, ಮಕ್ಕಳಿಗೆ ಕತೆ ಬರೆದಾತ, ಶಿಕ್ಷಣತಜ್ಞ, ಭಾಷಾವಿಜ್ಞಾನಿ, ಅಲೆಮಾರಿ, ಪ್ರವಾಸಿ, ಪ್ರಯೋಗಶೀಲ, ವಿಜ್ಞಾನಿ, ನಾಸ್ತಿಕ, ಕಾದಂಬರಿಕಾರ, ವಾಗ್ಮಿ, ಶಿಲ್ಪಿ, ನಟ, ನೃತ್ಯಪಟು, ಸಂಪಾದಕ, ಪ್ರೇಮಿ, ಭಗ್ನಪ್ರೇಮಿ ಹಾಗೂ ಪರಿಸರವಾದಿ. ಜೊತೆಗೆ ಸಿಟ್ಟನ ಮೂಟೆ. ಹೀಗೆ ಕಾರಂತರು ನೂರುಮುಖಗಳ ಏಕವ್ಯಕ್ತಿ. ಚಿತ್ರಮಯ ದಕ್ಷಿಣ ಕನ್ನಡ, ಭಾರತೀಯ ಶಿಲ್ಪ, ಅಪೂರ್ವ ಪಶ್ಚಿಮ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಸ್ಮೃತಿಪಟಲದಿಂದ, ಹುಚ್ಚುಮನಸಿನ ಹತ್ತು ಮುಖ, ವಿಜ್ಞಾನ ಪ್ರಪಂಚ, ರಾಷ್ಟ್ರಗೀತ ಸುಧಾರಕ, ನೀಳ್ಗವನಗಳು ಹೀಗೆ ನಾಟಕ, ಕವಿತೆ, ಸಣ್ಣಕತೆ, ಕಾದಂಬರಿ, ವಿಮರ್ಶೆ, ವೈಜ್ಞಾನಿಕ ಬರಹ, ಪ್ರವಾಸ ಕಥನ- ಎಲ್ಲಾ ಪ್ರಕಾರಗಳಲ್ಲೂ ಬರೆದ ಕಾರಂತರು ಮೈಮನಗಳ ಸುಳಿಯಲ್ಲಿ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ, ಬೆಟ್ಟದ ಜೀವ, ಕನ್ನಡಿಯಲ್ಲಿ ಕಂಡಾತ, ಮರಳಿ ಮಣ್ಣಿಗೆ... ಹೀಗೆ ಅರುವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ.
ಕಾರಂತರು ಶತಾಯುಷಿಗಳಾಗುತ್ತಾರೆ ಎಂದೇ ಅವರ ಅಭಿಮಾನಿಗಳು ನಂಬಿದ್ದರು. ತೊಂಬತ್ತಮೂರರಲ್ಲೂ ಯಾರ ನೆರವೂ ಇಲ್ಲದೆ ನಡೆಯುತ್ತಿದ್ದ, ಕುಣಿಯುತ್ತಿದ್ದ ಕಾರಂತರು 1997ರಲ್ಲಿ ತೀರಿಕೊಂಡರು.
ಪ್ರಶಸ್ತಿ ಮಾಲಿಕೆ:
1954ರಲ್ಲಿ ಮೈಸೂರಿನಲ್ಲಿ ನಡೆದ 57ನೇ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ.
ಪದ್ಮಭೂಷಣ (ತುರ್ತು ಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ಇದನ್ನವರು ಮರಳಿಸಿದ್ದರು)
ಕೇಂದ್ರ ಸಾಹಿತ್ಯ ಅಕಾಡೆಮಿ-1959-ಯಕ್ಷಗಾನ ಬಯಲಾಟ ಕೃತಿಗೆ.
ಸ್ವೀಡಿಷ್ ಅಕಾಡೆಮಿ ಪಾರಿತೋಷಕ- ಇದೇ ಕೃತಿಗೆ.
ಕರ್ನಾಟಕ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ - 1963ರಲ್ಲಿ.
ಮಧ್ಯಪ್ರದೇಶದ ತುಲಸಿ ಸಮ್ಮಾನ್
ಇಂದಿರಾಗಾಂಧಿ ವೃಕ್ಷಮಿತ್ರ ಪ್ರಶಸ್ತಿ - 1992
ಪಂಪ ಪ್ರಶಸ್ತಿ - ಮೈಮನಗಳ ಸುಳಿಯಲ್ಲಿ - 1990
ಜ್ಞಾನಪೀಠ - ಮೂಕಜ್ಜಿಯ ಕನಸುಗಳು - 1978
ಮುಖಪುಟ /
ಸಾಹಿತ್ಯ-ಸಂಸ್ಕೃತಿ