ಅಪೂರ್ಣತೆಯ ಪರಿಪೂರ್ಣ ಚಿತ್ರಕಾರ
ಮನುಷ್ಯನ ಪೂರ್ಣತ್ವದ ಬಗ್ಗೆ ಆರಂಭದಿಂದಲೇ ಒಂದು ರೀತಿಯ ಅನುಮಾನ ಇಟ್ಟುಕೊಂಡೇ ಬಂದವರು . ಗೊಂದಲಕ್ಕೆ ಸಿಲುಕಿ ತನ್ನನ್ನೇ ತಾನು ನಿರಾಕರಿಸುವ ಮನುಷ್ಯನ ಚಿತ್ರಣಕ್ಕೆ ಯಯಾತಿಯ ನಾಯಕ, ಹಯವದನದ ದೇವದತ್ತ, ನಾಗಮಂಡಲದ ನಾಯಕ, ತುಘಲಕ್ , ಇನ್ನೇನು ಬೇಕು ಸಾಕ್ಷಿ?
*ಸತ್ಯವ್ರತ ಹೊಸಬೆಟ್ಟು
ಕನ್ನಡದಲ್ಲಿ ಕತೆ, ಕಾದಂಬರಿ, ಕವಿತೆ, ಮಹಾಕಾವ್ಯಗಳು ಬಂದಷ್ಟು ನಾಟಕಗಳು ಬರಲಿಲ್ಲ. ಇವತ್ತಿಗೂ ನಾಟಕ ಒಂದು ಸಾಹಿತ್ಯಪ್ರಕಾರವಲ್ಲ, ರಂಗ ಪ್ರಕಾರ ಎಂಬ ನಂಬಿಕೆಯೇ ಅನೇಕರಲ್ಲಿದೆ. ಅದಕ್ಕೆ ಸರಿಯಾಗಿ ಸಾಕಷ್ಟು ಜಾನಪದ ಕೃತಿಗಳೂ ನಮ್ಮಲ್ಲಿ ಅಸ್ತಿತ್ವದಲ್ಲಿವೆ. ವರ್ಷಕ್ಕೆ ಏನಿಲ್ಲವೆಂದರೂ ಒಂದೂವರೆ ಸಾವಿರ ನಾಟಕಗಳು ಪ್ರದರ್ಶಿತವಾಗುವ ಕನ್ನಡ ನಾಡಲ್ಲಿ ನಾಟಕಗಳು ಪುಸ್ತಕ ರೂಪದಲ್ಲಿ ಬರುವುದು ನೂರೋ ಇನ್ನೂರೋ ಮಾತ್ರ. ಉಳಿದಂತೆ ನಾಟಕವೆಂದರೆ, ಮಾತು ಮತ್ತು ಕ್ರಿಯೆಗಳ ರಂಗಕೃತಿ.
ಅದಕ್ಕೊಂದು ಸಾಹಿತ್ಯ ಕೃತಿಯ ಬೆಂಬಲವೂ ಬೇಕಿಲ್ಲ ಎಂದುಕೊಂಡವರೂ ಇದ್ದಾರೆ. ಉದಾಹರಣೆಗೆ ಹಿರಣ್ಣಯ್ಯ ರಂಗಭೂಮಿಯಿಂದ ಪ್ರಸಿದ್ಧರಾಗಿದ್ದರೂ, ಅವರ ಹೆಸರಿನಲ್ಲಿ ಸಾಕಷ್ಟು ನಾಟಕಗಳಿದ್ದರೂ ಅದು ಭಾಷೆಯ ಮೇಲೆ ಅರ್ಥದ ಮೇಲೆ ನಿಂತಿದ್ದಲ್ಲ. ಮಾತಿನ ಮೇಲೆ ನಿಂತದ್ದು. ಆದರೆ, ಷೇಕ್ಸ್ಪಿಯರ್ನ ಇಂಗ್ಲೆಂಡ್ನಲ್ಲಿ ಇವತ್ತೂ ನಾಟಕಗಳದ್ದೇ ರಾಜ್ಯಭಾರ. ಅಮೆರಿಕಾದ ಹೆರಾಲ್ಡ್ ಪಿಂಟರ್ ಮುಂತಾದವರು ಕಿರುನಾಟಕಗಳನ್ನು ಬರೆದಿದ್ದಾರೆ. ಬರ್ನಾಡ್ ಷಾ ಕೂಡ ನಾಟಕಕಾರನಾಗಿಯೇ ಮಾನ್ಯ. ಬ್ರೆಕ್ಟ್, ಬೆಕೆಟ್, ಮೊಲಿಯರ್, ಲೋರ್ಕಾ ಮೊದಲಾದವರೆಲ್ಲ ನಾಟಕಗಳಲ್ಲೇ ತಮ್ಮನ್ನು ತೆರೆದಿಟ್ಟುಕೊಂಡವರು. ನಮ್ಮಲ್ಲಿ ನಾಟಕ ಎಂದೊಡನೆ ನೆನಪಾಗುವ ಹೆಸರು ಕಾಳಿದಾಸ. ಆತನ ಸಂಸ್ಕೃತ ನಾಟಕಗಳನ್ನು ನಾವು ಓದಿ ಖುಷಿಪಟ್ಟು ಅನುವಾದಿಸಿ ಆಡಿ ರಂಗಾನುಭವ ಅನುಭವಿಸಿದ್ದೂ ಆಯ್ತು.
ಆದರೆ, ಆಧುನಿಕ ನಾಟಕಕಾರರ ಪೈಕಿ ಹೆಸರು ಮಾಡಿದವರು ಕಾರ್ನಾಡ್, ಕಂಬಾರ, ಅದರಲ್ಲೂ ಎಪ್ಪತ್ತರ ದಶಕದಲ್ಲಿ ನಾಟಕರಂಗ ಹೊಸದೊಂದು ಸ್ವರೂಪಕ್ಕೆ ತನ್ನನ್ನು ಒಗ್ಗಿಸಿಕೊಂಡಿತು. ಹವ್ಯಾಸಿ ರಂಗಭೂಮಿಯ ಪ್ರಭಾವದಿಂದಾಗಿ ಅನೇಕ ರಂಗಕರ್ಮಿಗಳು ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡರು. ಅಂಥವರ ಪೈಕಿ ಮುಖ್ಯ ಹೆಸರು ಗಿರೀಶ್ಕಾರ್ನಾಡ್ರದು. ಕಾರ್ನಾಡ್ರು ಹುಟ್ಟಿದ್ದು ಮಹಾರಾಷ್ಟ್ರದ ಮಾಥೇರಾನ್ನಲ್ಲಿ. ತಂದೆ ಕ್ರಾಂತಿಕಾರಿ ಅನ್ನಿಸಿಕೊಂಡ ರಘುನಾಥ ಕಾರ್ನಾಡ್. ತಾಯಿ ಕೃಷ್ಣಾಬಾಯಿ. ಪತಿಯನ್ನು ಕಳೆದುಕೊಂಡ ಕೃಷ್ಣಾಬಾಯಿಯವರನ್ನು, ವಿಧುರ ರಘುನಾಥರು ಕೈ ಹಿಡಿದದ್ದು ಆಗಿನ ಕಾಲಕ್ಕೆ ಪ್ರಗತಿಶೀಲ ಧೋರಣೆಯೇ ಆಗಿತ್ತು.
ಕಾರ್ನಾಡರು ಪ್ರಾಥಮಿಕ ಶಿಕ್ಷ ಪಡೆದದ್ದು ಶಿರಸಿಯಲ್ಲಿ. ಪ್ರೌಢ ಶಿಕ್ಷಣ ನಡೆದದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ. ಕರ್ನಾಟಕ ಕಾಲೇಜಿನಲ್ಲಿ ಬಿ.ಎ, ಮುಂಬಯಿಯಲ್ಲಿ ಎಂ.ಎ., ಅಲ್ಲಿ ಓದುತ್ತಿದ್ದಾಗ ರೋಡ್ಸ್ ಸ್ಕಾಲರ್ಶಿಪ್ ಪಡೆದು ಅಕ್ಸ್ಫರ್ಡ್ನ ಮ್ಯಾಗ್ಡಲೀನ್ ಕಾಲೇಜಿಗೆ ಪ್ರವೇಶ.
ನವ್ಯದ ಗಾಳಿಗೆ ಸಿಲುಕಿ : ಓದು ಮುಗಿಯುವಷ್ಟರಲ್ಲೇ ಕಾರ್ನಾಡರಿಗೆ ಮದ್ರಾಸಿನಲ್ಲಿರುವ ಆಕ್ಸ್ಫರ್ಡ್ ಪ್ರೆಸ್ನಲ್ಲಿ ಕೆಲಸ ಸಿಗುತ್ತದೆ. ಮದ್ರಾಸಿನಲ್ಲೇ ತಳವೂರಿದ ಕಾರ್ನಾಡರನ್ನು ಆಗಷ್ಟೇ ಚಿಗಿತುಕೊಳ್ಳುತ್ತಿರುವ ವಸಾಹತ್ತೋತ್ತರ ಚಿಂತನೆಗಳು ಸೆಳೆಯುತ್ತವೆ. ನವ್ಯದ ಗಾಳಿಯೂ ಆಗತಾನೆ ಬೀಸಲು ಶುರುವಾಗಿರುತ್ತದೆ. ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯಿಂದ ಪ್ರೇರಿತರಾದ ಕಾರ್ನಾಡರು ಅದನ್ನು ಕಾರಂತರ ಜೊತೆಗೂಡಿ ಸಿನಿಮಾ ಮಾಡುತ್ತಾರೆ.
ಸಂಸ್ಕಾರ ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಮೊದಲ ಚಿತ್ರ. ಅದರಲ್ಲಿ ಪ್ರಾಣೇಶಾಚಾರ್ಯನ ಪಾತ್ರ ನಿರ್ವಹಿಸಿ ಕಾರ್ನಾಡ್ ಎಲ್ಲರ ಗಮನ ಸೆಳೆದರು. ಮುಂದೆ ಬಾಬಾ ಸ್ಕಾಲರ್ಷಿಪ್ ನೆರವಿನಿಂದ ಧಾರವಾಡಕ್ಕೆ ಮರಳಿ ಬಂದು ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಸಿನಿಮಾ ಮಾಡಿ, ನಾಟಕ ರಚನೆಗೆ ತೊಡಗಿದ ಕಾರ್ನಾಡರು ಮುಂದೆ ಕಾಲಿಟ್ಟದ್ದು ಪುಣೆಗೆ. ಅಲ್ಲಿನ ಫಿಲ್ಮ್ ಇನ್ಸ್ಟಿಟ್ಯೂಟ್ನ ನಿರ್ದೆಶಕರಾಗಿ. ಆ ಹುದ್ದೆಗೂ ರಾಜೀನಾಮೆ ಕೊಟ್ಟು ಮುಂಬಯಿ ಸೇರಿಕೊಂಡ ಕಾರ್ನಾಡ್ ಈ ಅವಧಿಯಲ್ಲೇ ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಉತ್ಸವ್, ಗೋಧೂಳಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದು. ಇವುಗಳ ಪೈಕಿ ಒಂದಾನೊಂದು ಕಾಲದಲ್ಲಿ ಶಂಕರ್ನಾಗ್ಗೆ ಹೆಸರು ತಂದುಕೊಟ್ಟ ಚಿತ್ರ.
ಆನಂತರ ಕಾರ್ನಾಡ್ ನಿರ್ದೇಶಿಸಿದ ಚಿತ್ರ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಇದಕ್ಕೂ ಮೊದಲು ಅವರು ಕನಕಪುರಂದರ, ದರಾ ಬೇಂದ್ರೆ, ಸೂಫಿ ಪಂಥ ಮುಂತಾದ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೂ ಉಂಟು. ಅನಂತಮೂರ್ತಿ, ಕುವೆಂಪು, ಈ ಇಬ್ಬರು ಜ್ಞಾನಪೀಠ ವಿಜೇತರ ಕಾದಂಬರಿಗಳನ್ನು ನಿರ್ದೇಶಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತರು ಕಾರ್ನಾಡ್. ಹಾಗೇ ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಬೇಂದ್ರೆಯವರ ಕುರಿತು ಸಾಕ್ಷ್ಯ ಚಿತ್ರವನ್ನೂ ತೆಗೆದರು.
ಕಾರ್ನಾಡರು ವಿವಾಹವಾದದ್ದು ಸರಸ್ವತಿಯವರನ್ನು. ಆಕೆ ಅಮೆರಿಕಾದ ಆಸ್ಪತ್ರೆಯಾಂದರಲ್ಲಿ ಅಧಿಕಾರಿ ಆಗಿದ್ದವರು. ಸ್ನೇಹ, ಪ್ರೇಮವಾಗಿ, ಪ್ರೇಮ ಮದುವೆ ಬಂಧನದಲ್ಲಿ ಧನ್ಯತೆ ಗಳಿಸುತ್ತದೆ.
ಕೃತಿಗಳು : ಕಾರ್ನಾಡರ ಮೊದಲ ನಾಟಕ ಯಯಾತಿ, ನಂತರ ಬಂದದ್ದು ಹಯವದನ. ಮನುಷ್ಯನ ಪೂರ್ಣತ್ವದ ಬಗ್ಗೆ ಕಾರ್ನಾಡರು ಆರಂಭದಿಂದಲೇ ಒಂದು ರೀತಿಯ ಅನುಮಾನ ಇಟ್ಟುಕೊಂಡೇ ಬಂದವರು. ಯಯಾತಿಯ ನಾಯಕನಾಗಲೀ, ಹಯವದನದ ದೇವದತ್ತನಾಗಲೀ, ನಾಗಮಂಡಲದ ನಾಯಕನಾಗಲೀ, ತುಘಲಕ್ನಾಗಲೀ ಪೂರ್ಣನಲ್ಲ. ಆತ ಅನೇಕಾನೇಕ ಗೊಂದಲಗಳಲ್ಲಿ ತನ್ನನ್ನೇ ತಾನು ನಿರಾಕರಿಸುವ ವ್ಯಕ್ತಿ. ತಲೆದಂಡ , ಬಸವಣ್ಣ, ಅಗ್ನಿ ಮತ್ತು ಮಳೆಯ ಪರಾವಸು, ಅಂಜುಮಲ್ಲಿಗೆಯ ಜೋಡಿ, ಹಿಟ್ಟಿನ ಹುಂಜದ ಕಾನ್ಸೆ ಪ್ಟು. ಎಲ್ಲವೂ ಅಪೂರ್ಣತೆಯನ್ನು ನೆಚ್ಚಿಕೊಂಡದ್ದು. ಅವರ ಇತ್ತೀಚಿನ ನಾಟಕ ಟೀಪುವಿನ ಕನಸು ಅಥವಾ ಟಿಪ್ಪು ಸುಲ್ತಾನ.
ಪ್ರಶಸ್ತಿಹಾರ: 1974ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ, 1984ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಯಯಾತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ತುಘಲಕ್ಗೆ ರಾಜ್ಯ ಪ್ರಶಸ್ತಿ, ಹಯವದನಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ತಲೆದಂಡಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಸ್ಕಾರ, ವಂಶವೃಕ್ಷ ಮತ್ತು ಕಾಡು ಚಿತ್ರಗಳಿಗೆ ಸ್ವರ್ಣಕಮಲ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 1998ರಲ್ಲಿ ಜ್ಞಾನಪೀಠ. ಹೀಗೆ ಕಾರ್ನಾಡರ ಸಾಧನೆಗೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ.
1976 -78ರ ಅವಧಿಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷರಾಗಿ, 1987ರಲ್ಲಿ ಚಿಕಾಗೋ ಯೂನಿವರ್ಸಿಟಿಯ ಸಂದರ್ಶಕ ಪ್ರಾಧ್ಯಾಪಕರಾಗಿ, 1988 -93ರ ಅವಧಿಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಅಧ್ಯಕ್ಷರಾಗಿ ಕಾರ್ನಾಡರು ಸೇವೆ ಸಲ್ಲಿಸಿದ್ದಾರೆ.
ಜನನ- 19.05.1938 (ಮಹಾರಾಷ್ಟ್ರ)
ಪ್ರಮುಖ ಕೃತಿಗಳು ನಾಟಕ : ಯಯಾತಿ, ತುಘಲಕ್, ಹಯವದನ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ
ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ : 1998 (ಸಮಗ್ರ ಸಾಹಿತ್ಯ)
ಮುಖಪುಟ /
ಸಾಹಿತ್ಯ-ಸಂಸ್ಕೃತಿ