
ಎಂಥವರೂ ಪ್ರೀತಿಸಬಹುದಾಗಿದ್ದ ಅನಂತಮೂರ್ತಿ, ಈಗಲೂ ಹಾಗೇ ಇದ್ದಾರೆ. ಮುಂದೆಯೂ ಹಾಗೇ ಇರುತ್ತಾರಾ !
*ಸತ್ಯವ್ರತ ಹೊಸಬೆಟ್ಟು ಜ್ಞಾನಪೀಠ ಪ್ರಶಸ್ತಿ ವಿಜೇತರ ಪೈಕಿ ಅತ್ಯಂತ ವಿವಾದಾಸ್ಪದರು. ಪ್ರತಿಭಾವಂತರು, ಪ್ರಭಾವಲಯದಲ್ಲಿದ್ದವರು. ವಿದೇಶಗಳನ್ನು ಸುತ್ತಾಡಿದವರು. ತನ್ನ ಕಾಲದ ಯುವಕರಿಗೆ ಮಾದರಿಯಾಗಿದ್ದವರು. ಸೂಜಿಗಲ್ಲಿನಂಥ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆದವರು. ಲೇಖಕನಿಗೆ ಸ್ಟಾರ್‌ವ್ಯಾಲ್ಯೂ ತಂದುಕೊಟ್ಟವರು - ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.
ಹಾಗೆ ನೋಡಿದರೆ ನವ್ಯವನ್ನು ಕೈ ಹಿಡಿದು ನಡೆಸಿದ ಖ್ಯಾತಿ ಅನಂತಮೂರ್ತಿಯವರಿಗೇ ಸಲ್ಲಬೇಕು. ಕಂಬಾರ, ಪಾಟೀಲ, ಶರ್ಮ,
ಗೋಕಾಕ್, ನಾಡಿಗ್ ಮುಂತಾದವರು ನವ್ಯವನ್ನು ಅಪ್ಪಿಕೊಳ್ಳುವ ಹೊತ್ತಿಗೆ, ಅಡಿಗರಿಗೆ ನವ್ಯ ಸಿದ್ಧಿಸಿತ್ತು . ಅಡಿಗರಿಗೆ ಸಿದ್ಧಿಸಿದ ನವ್ಯವನ್ನು ಅತ್ಯಂತ ಆಪ್ತವಾಗಿ ಸಾಹಿತ್ಯವಾಗಿಸಿದ್ದು ಅನಂತಮೂರ್ತಿ ಒಬ್ಬರೇ. ಶರ್ಮ ತಮ್ಮ ಪದ ಪ್ರಯೋಗಗಳಿಂದ, ವಿದೇಶಿ ಅನುಭವಗಳನ್ನು ದಾಖಲಿಸುವ ಹಂಬಲದಿಂದ ಅರ್ಥವಾಗದೆ ಉಳಿದರೆ, ನಾಡಿಗ ಸ್ವರತಿ ಹಾಗೂ ಮೂರ್ತಿ ಭಂಜನೆಯಲ್ಲಿ ನಿರತರಾಗಿ ಘನತೆ ಕಳಕೊಂಡರು. ಕಂಬಾರ ಜಾನಪದಕ್ಕೆ ಗಂಟು ಬಿದ್ದು ಅವರ ಪ್ರತಿಭೆಯಲ್ಲಿ ಅವರದೆಷ್ಟು, ಜನಪದದೆಷ್ಟು ಎನ್ನುವುದು ಗೊತ್ತಾಗದೇ ಹೋಯಿತು. ಆದರೆ, ಅನಂತಮೂರ್ತಿ ಇಂಥ ತಪ್ಪುಗಳನ್ನು ಮಾಡಲಿಲ್ಲ . ಒಂದು ಹೊಸ ಸಾಹಿತ್ಯ ಚಳವಳಿಯಿಂದ ಎಷ್ಟೆಲ್ಲವನ್ನು ಗಳಿಸಿಕೊಳ್ಳಬಹುದೋ, ದಕ್ಕಿಸಿಕೊಳ್ಳಬಹುದೋ ಅಷ್ಟನ್ನೂ ದಕ್ಕಿಸಿಕೊಂಡವರು ಅವರು. ಹಾಗೇ, ಅದನ್ನು ಜನಪ್ರಿಯವಾಗಿಸಿದ್ದೂ ಅವರೊಬ್ಬರೆ ಎನ್ನಬಹುದು. ಲಂಕೇಶರ ಥರ ಅವರು ಪರಮಸಂಕೋಚ ಹಾಗೂ ಹಿಂಜರಿಕೆ ತೋರಲಿಲ್ಲ . ಅವರ ಹಾಗೆ, ನಂತರ ಹಲಬುವುದನ್ನೂ ಮಾಡಲಿಲ್ಲ .
ಶಿವಮೊಗ್ಗೆಯ ಮೇಳಿಗೆ ಗ್ರಾಮದಲ್ಲಿ ಹುಟ್ಟಿದ (21.12.1932) ಅನಂತಮೂರ್ತಿಯವರ ತಂದೆ ರಾಜಗೋಪಾಲಾಚಾರ್ಯ. ತಾಯಿ ಸತ್ಯಭಾಮಾ. ಅಗ್ರಹಾರದ ಹೆಸರು ದೂರ್ವಾಸಪುರ. ಅದು ಉಸಿರುಗಟ್ಟಿಸುವ ಮಡಿವಂತಿಕೆ ತಾಂಡವವಾಡುತ್ತಿದ್ದ ಅಗ್ರಹಾರ ಎಂದು ಸೂಕ್ಷ್ಮಜ್ಞರಲ್ಲದ ಮಂದಿ ಈ ಅಗ್ರಹಾರವನ್ನು ವರ್ಣಿಸಿದ್ದಾರೆ. ಮಡಿವಂತಿಕೆ ಯಾಕೆ ಉಸಿರುಗಟ್ಟಿಸಬೇಕು ಮತ್ತು ಆ ಪರಿಸರವೇ ಅನಂತಮೂರ್ತಿಯವರ ಸೃಷ್ಟಿಕ್ರಿಯೆಗೆ ನೆರವಾಯಿತು ಅನ್ನುವುದನ್ನು ನಾವು ಮರೆಯಕೂಡದು.
ತೀರ್ಥಹಳ್ಳಿ ಹಾಗೂ ಶಿವಮೊಗ್ಗೆಯಲ್ಲಿ ಪ್ರಾರಂಭದ ಶಿಕ್ಷಣ ಪೂರೈಸಿದ ಅನಂತಮೂರ್ತಿ ಮುಂದೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. 1956 ರಲ್ಲಿ ಬಂಗಾರದ ಪದಕದೊಂದಿಗೆ ಸ್ನಾತಕೋತ್ತರ ಪದವೀಧರರಾಗುತ್ತಾರೆ. ನಂತರ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಈ ನಡುವೆ ಶಿವಮೊಗ್ಗ, ಹಾಸನ, ಮೈಸೂರು ಮಹಾರಾಜಾ ಕಾಲೇಜುಗಳಲ್ಲಿ ಉಪನ್ಯಾಸಕ ವೃತ್ತಿ . ಮೂರು ವರ್ಷಗಳ ಕಾಲ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ರೀಡರ್. 1970 ರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ. 1987 ರಲ್ಲಿ ಕೇರಳದ ಕೊಟ್ಟಾಯಂ ಮಹಾತ್ಮಗಾಂಧಿ ವಿವಿಯ ಉಪಕುಲಪತಿ ಹುದ್ದೆಗೆ ನೇಮಕ. ಮರಳಿ ಮೈಸೂರು ವಿಶ್ವವಿದ್ಯಾಲಯಕ್ಕೆ. ನಂತರ ಸ್ವಯಂ ನಿವೃತ್ತಿ ಪಡೆದು ನ್ಯಾಷನಲ್ ಬುಕ್‌ಟ್ರಸ್ಟ್ ಅಧ್ಯಕ್ಷತೆ. ಅದರ ಮುಂದಿನ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ.
ಅನಂತಮೂರ್ತಿ ಅದ್ಭುತ ಮಾತುಗಾರರು ಅನ್ನುವವರಿದ್ದಾರೆ. ಅದು ನಿಜವೇ. ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಮೂರ್ತಿ, ಬಹಳಷ್ಟು ದೇಶಗಳನ್ನು ಸುತ್ತಾಡಿದ್ದಾರೆ. ಆದರೆ, ಇಂಥ ಅಪ್ರತಿಮ ಮಾತುಗಾರ ಮೌನಿ ಎಂಬ ಕತೆಯನ್ನೂ ಬರೆಯಬಲ್ಲರು. ತಮ್ಮ ಆರಂಭದ ಎಂದೆಂದೂ ಮುಗಿಯದ ಕತೆಯಿಂದ ಇದೀಗ ಬರೆಯುತ್ತಿರುವ ಇನ್ನೂ ಹೆಸರಿಡದ ಕಾದಂಬರಿಯ ತನಕ ಮೂರ್ತಿ ಸದಾ ಕ್ರಿಯಾಶೀಲರು. ರುಜುವಾತು ತ್ರೆೃಮಾಸಿಕ, ಆವಾಹನೆಯಂಥ ನಾಟಕ, ಮೂರು ಕವನ ಸಂಕಲನಗಳು, ನಾಲ್ಕು ಕಾದಂಬರಿಗಳು, ಸಾಕಷ್ಟು ವಿಮರ್ಶೆ, ಭಾಷಣ, ಲೇಖನ ಹೀಗೆ ಅನಂತಮೂರ್ತಿ ಬರೆಯುತ್ತಲೇ ಬಂದವರು. ಅವರು ಇವತ್ತಿಗೂ ಹೆಸರು ಮಾಡಿರುವುದು ಸಣ್ಣ ಕತೆಗಾರರೆಂದೇ. ಮಾಸ್ತಿಯ ನಂತರ ಥಟ್ಟನೆ ನೆನಪಿಗೆ ಬರುವ ಹೆಸರು ಅನಂತಮೂರ್ತಿ ಅವರದ್ದೆ .
ಅನಂತಮೂರ್ತಿಯವರ ಸಂಸ್ಕಾರ ಚಲನಚಿತ್ರವಾಗಿ ಸಾಕಷ್ಟು ವಿವಾದಗಳನ್ನು ಹ್ಟುಟುಹಾಕಿತು. ಘಟಶ್ರಾದ್ಧ , ಬರ, ಅವಸ್ಥೆಗಳೂ ವಿವಾದಾತೀತವಾಗೇನೂ ಉಳಿಯಲಿಲ್ಲ . ಕೊನೆಗೆ ಅವರಿಗೆ ಜ್ಞಾನಪೀಠ ಬಂದದ್ದೂ ವಿವಾದಕ್ಕೆ ಕಾರಣವಾಯಿತು.
ಎಂಥವರೂ ಪ್ರೀತಿಸಬಹುದಾಗಿದ್ದ ಅನಂತಮೂರ್ತಿ, ಈಗಲೂ ಹಾಗೇ ಇದ್ದಾರೆ. ಭಯಪಡಿಸುವ ಬ್ರಾಹ್ಮಣ ವಿನಯ ಅವರದು ಎನ್ನಲಾಗದು. ಅದು ನಿರ್ಮಲ ಸಜ್ಜನಿಕೆ. ಮಾತಾಡುತ್ತಾ ಆಡುತ್ತಾ ನಿಮ್ಮ ತನುಮನಗಳನ್ನು ಆವರಿಸಿಕೊಳ್ಳುವ ಶಕ್ತಿಯಿರುವ ಮಾತುಗಾರ ಮೂರ್ತಿ, ಕಳೆದ ಕೆಲವು ವರ್ಷಗಳಿಂದ ಮಾತಲ್ಲಿ ಅತಿ ಲೋಲುಪರಾಗಿದ್ದಾರೆಂಬ ಆರೋಪಕ್ಕೂ ತುತ್ತಾಗಿದ್ದರು.
ಪದ್ಮಭೂಷಣ, ಜ್ಞಾನಪೀಠ, ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ , ಮಾಸ್ತಿ ಪ್ರಶಸ್ತಿ ... ಹೀಗೆ ಅನೇಕ ಗೌರವಗಳಿಗೆ ಭಾಜನರಾದ ಅನಂತಮೂರ್ತಿಯವರ ಕಾದಂಬರಿ ಆಧರಿತ ಸಿನಿಮಾಗಳೂ ಪ್ರಶಸ್ತಿ ಪಡೆದಿವೆ.
ಅನಂತಮೂರ್ತಿ ಮಾತಿನ ಝಲಕ್‌ಗೆ ಉದಾಹರಣೆಯಾಗಿ ಈ ಸಾಲುಗಳನ್ನು ನೋಡಿ -
ವಾಗ್‌ವೈಭವ ಅಪಾಯಕಾರಿ. ಅದು ಸಮೂಹವನ್ನು ಉದ್ರೇಕಗೊಳಿಸುವುದಕ್ಕಾಗಿ ರೂಪಿತವಾದದ್ದು . ಸುಳ್ಳುಗಳನ್ನು ಕೇಳಿಸಿಕೊಳ್ಳುತ್ತಾ ಬದುಕುವುದು ಸಾಮಾನ್ಯವಾಗಿ ಎಲ್ಲರಿಗೂ ಕ್ಷೇಮ ಅನ್ನಿಸುತ್ತದೆ, ಹಿತವೆನ್ನಿಸುತ್ತದೆ. ಆದರೂ ಜನರ ಆತ್ಮ ಸತ್ಯಕ್ಕಾಗಿ ಹಸಿದಿರುತ್ತದೆ. ಆದ್ದರಿಂದ ನಾವು ಅತ್ಯಂತ ಏಕಾಂಗಿತನದಲ್ಲಿ ನಂಬಿದ್ದನ್ನು ಹೇಳುವ ಧೈರ್ಯ ಮಾಡಬೇಕು. ನಮಗೆ ನಾವು ಸುಳ್ಳು ಹೇಳಿಕೊಂಡು ಬದುಕುವ ಶೈಲಿಗೆ ಬದ್ಧರಾಗಿಬಿಟ್ಟರೆ ಯಾರೂ ನಮ್ಮನ್ನು ಪಾರು ಮಾಡುವಂತಿಲ್ಲ .
ನಮ್ಮನ್ನು ಮೆಚ್ಚಿದವರು ಬಯಸುವ ಸಾರ್ವಜನಿಕ ವ್ಯಕ್ತಿಗಳಾಗಿ ನಾವು ಆಗಿಬಿಡಬಾರದು. ತನ್ನ ಪ್ರತಿಯಾಂದು ಕೃತಿಯಲ್ಲೂ ತನ್ನನ್ನು ಮೆಚ್ಚಿದವರು ಬಯಸುವ ಸಾರ್ವಜನಿಕ ವ್ಯಕ್ತಿಗಳಾಗಿ ನಾವು ಆಗಿಬಿಡಬಾರದು. ತನ್ನ ಪ್ರತಿಯಾಂದು ಕೃತಿಯಲ್ಲೂ ತನ್ನನ್ನು ಮೆಚ್ಚಿಕೊಂಡ ಮಂದಿಯಲ್ಲಿ ಕೆಲವರನ್ನಾದರೂ ಕಳೆದುಕೊಳ್ಳದ ಲೇಖಕ ಎಲ್ಲೋ ಸುಳ್ಳಾಡುತ್ತಿದ್ದಾನೆ ಅನ್ನುವ ಅನುಮಾನ ನಮಗಿರಬೇಕು. ಯಾಕೆಂದರೆ ನಾವು ನಮ್ಮನ್ನೇ ಅನುಕರಿಸಿಕೊಳ್ಳುತ್ತಿರಬಹುದು ಅಥವಾ ಸಾರ್ವಜನಿಕರ ಕಣ್ಣಿಗೆ ಇಷ್ಟವಾಗುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳುತ್ತಿರಬಹುದು- ಜ್ಞಾನಪೀಠ ಪ್ರಶಸ್ತಿ ಸ್ವೀಕಾರದ ಸಂದರ್ಭದ ಭಾಷಣದ ಸಾಲುಗಳು, ಈ ಮಾತುಗಳು ಅನಂತಮೂರ್ತಿಯವರ ತೀವ್ರತೆ ಹಾಗೂ ಜಾಣತನ ಎರಡನ್ನೂ ತೋರುತ್ತವೆ.
ಒಂದು ಊಹಿತ ಸಮಸ್ಯೆಯನ್ನು ತಾವೇ ಹುಟ್ಟುಹಾಕಿಕೊಂಡು ಅದರ ಅನೇಕ ಆಯಾಮಗಳನ್ನು ಬಗೆಯುತ್ತಾ ಹೋಗುವುದು ಅವರಿಗೆ ಪ್ರಿಯವಾದ ಶೈಲಿ. ಸಂಸ್ಕಾರ, ಘಟಶ್ರಾದ್ಧ , ಭಾರತೀಪುರ, ಅವಸ್ಥೆ ... ಎಲ್ಲವೂ ಅದೇ ಅಲ್ಲವೇ ?
ಜನನ- 21.12.1932 (ಶಿವಮೊಗ್ಗ ಜಿಲ್ಲೆಯ ಮೇಳಿಗೆ)
ಪ್ರಮುಖ ಕೃತಿಗಳು
ಕಾದಂಬರಿ : ಸಂಸ್ಕಾರ, ಭಾರತೀಪುರ, ಅವಸ್ಥೆ ,ಭವ, ದಿವ್ಯ
ಕಥಾ ಸಂಗ್ರಹ : ಆಕಾಶ ಮತ್ತು ಬೆಕ್ಕು , ಮೌನಿ, ಪ್ರಶ್ನೆ
ನಾಟಕ: ಆವಾಹನೆ
ವಿಮರ್ಶೆ : ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಪೂರ್ವಾಪರ
ಕವನ ಸಂಕಲನ : ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ
ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ : 1994 (ಸಮಗ್ರ ಸಾಹಿತ್ಯ)
ಅನಂತಮೂರ್ತಿ ಯವರ ಬಗ್ಗೆ ಬರೆಯುವುದು ಅವರ ಬರಹಗಳಷ್ಟೇ ಸಂಕೀರ್ಣ. ಅವರ ವ್ಯಕ್ತಿ ಪರಿಚಯ ಅಪೂರ್ನವಗಿದ್ದರೂ ತುಂಬ ಚೆನ್ನಾಗಿದೆ..
ಉತ್ತರಿಸಿ | ನಿಂದನಾ ಸಂದೇಶವಿದ್ದರೆ ವರದಿ ಮಾಡಿ